ನೆಗಡಿ -
ಶೀತವಾದಾಗ ಸರ್ವೇಸಾಮಾನ್ಯ ಎಲ್ಲರಿಗೂ ಬರುವ ಸೋಂಕು ಖಾಯಿಲೆ (ಕಾಮನ್ ಕೋಲ್ಡ್, ನೇಸಲ್ ಕೆಟಾರ್ಹ್). ವೈರಸ್ ಗುಂಪಿಗೆ ಸೇರಿದ ವಿಷಕಣಗಳಿಂದ ಈ ಸೋಂಕು ವ್ಯಾಪಿಸುವುದು. ಇವು ಮೂಗಿನ ಹೊಳ್ಳೆಯ ಲೋಳೆ ಪೊರೆಯನ್ನು ಹೊಕ್ಕು ಅಲ್ಲಿ ಉರಿಯೂತ ಉಂಟುಮಾಡಿ ರೋಗ ವ್ಯಕ್ತವಾಗುವಂತೆ ಮಾಡುತ್ತವೆ. ಒಂದು ವರ್ಷದಲ್ಲಿ ಪ್ರತಿಯೊಬ್ಬನಿಗೂ ಎರಡರಿಂದ ಮೂರು ಸಲ ನೆಗಡಿ ಆಗಬಹುದು. ಬಲುಮಟ್ಟಿಗೆ ವಸಂತ ಮತ್ತು ಹೇಮಂತ ಋತುಗಳಲ್ಲಿ ಕಾಣಿಸಿಕೊಳ್ಳುವ ರೋಗವಿದು. ಮಳೆಯಲ್ಲಿ ನೆನೆದರೆ ಅಥವಾ ಶೀತಗಾಳಿಯಲ್ಲಿ ಅಡ್ಡಾಡಿದರೆ ಸರ್ವೇಸಾಮಾನ್ಯವಾಗಿ ನೆಗಡಿ ಬರುವುದು ವಾಡಿಕೆ. ಶಾಲೆಗೆ ಹೋಗುವ ಐದರಿಂದ ಆರು ವರ್ಷದ ಮಕ್ಕಳಿಗೆ ನೆಗಡಿ ತಾಗುವುದು ಬಲು ಹೆಚ್ಚು. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ನೆಗಡಿ ಹೆಚ್ಚಿಗೆ ಬಂದು ಬರಬರುತ್ತ ಕಡಿಮೆ ಆಗುವುದು. ಏಕೆಂದರೆ ಅವರಲ್ಲಿ ಶೀತನಿರೋಧ ಬೆಳೆಯುತ್ತದೆ. ಐವತ್ತೈದು ವರ್ಷಗಳ ಮೇಲ್ಪಟ್ಟವರಿಗೆ ನೆಗಡಿ ಬರುವುದು ಅಪರೂಪ. ಈ ಕಾಯಿಲೆ ದಡಾರದ ಜೊತೆಗೂ ಬರುವುದುಂಟು. ಕೆಲವು ತರದ ಔಷಧಿಗಳ ಸೇವನೆಯಿಂದಲೂ ನೆಗಡಿಯಂಥ ಸ್ಥಿತಿ ತಲೆದೋರುವುದುಂಟು. ಉದಾಹರಣೆಗೆ ಪೊಟ್ಯಾಸಿಯಮ್ ಅಯೊಡೈಡ್ ದೂಳಿನ ರೂಪದಲ್ಲಿ ನೆಗಡಿಯ ವಿಷಾಣುಗಳಿರುವ ವಾಯುಸೇವನೆಯಿಂದ ಆರೋಗ್ಯ ವ್ಯಕ್ತಿಗಳಿಗೂ ನೆಗಡಿ ಸೋಂಕು ಹತ್ತುತ್ತದೆ. ಅತಿ ಬಲಹೀನರಾಗಿರುವವರಲ್ಲಿಯೂ ಹೆಚ್ಚು ದಣಿದವರಲ್ಲಿಯೂ ಸೋಂಕು ಉಂಟಾಗುವುದು ಬಲು ಸುಲಭ. ನ್ಯೂನ ಪೋಷಣೆಯವರಿಗೆ ಸೋಂಕು ಹತ್ತುವುದು ಬಲು ಸಾಮಾನ್ಯ. ಮೂಗಿನ ಹೊಳ್ಳೆಯ ದ್ವಾರದಲ್ಲಿ ಅಡಚಣೆ ಇರುವವರಲ್ಲೂ ಅತಿ ಕೋಮಲ ಪ್ರಕೃತಿಯವರಲ್ಲೂ ನೆಗಡಿ ಸುಲಭವಾಗಿ ಕಾಣಿಸಿಕೊಳ್ಳುತ್ತದೆ. ಮೂತ್ರಪಿಂಡದ ರೋಗ, ಸಿಹಿಮೂತ್ರರೋಗ, ಕ್ಷಯರೋಗ, ತೈರಾಯಿಡ್ ಗ್ರಂಥಿರೋಗ ಇತ್ಯಾದಿ ಬೇನೆಗಳಿಂದ ನರಳುವವರಿಗೂ ಸಾಮಾನ್ಯವಾಗಿ ನೆಗಡಿ ಅಂಟುವುದು.

	ನೆಗಡಿ ಐದು ಬಗೆಯ ವಿಷಕಣಗಳಿಂದ ಉಂಟಾಗುವುದು. ರೋಗದ ಪ್ರಾರಂಭದಲ್ಲಿ ಈ ವಿಷಕಣಗಳನ್ನು ಬಿಟ್ಟರೆ ಮೂಗಿನ ಹೊಳ್ಳೆಗಳಲ್ಲಿ ಬೇರೆ ಯಾವ ಬಗೆಯ ವಿಷಕ್ರಿಮಿಗಳೂ ಇರುವುದಿಲ್ಲ; ಅವುಗಳಲ್ಲಿ ಏಕಾಣುಗಳಿಲ್ಲದೆ ಅವು ಬರಡು ಆಗಿರುತ್ತದೆ. ನೆಗಡಿ ಸೋಂಕು ತಗಲಿದ ಎರಡು ಮೂರು ದಿವಸಗಳ ಅನಂತರ ಬೇರೆ ಬೇರೆ ರೋಗಾಣುಗಳು ಸೇರಿಕೊಂಡು ಮರುಚಲ ಸೋಂಕಿಗೆ ಕಾರಣವಾಗುವುದರಿಂದ ನೆಗಡಿಯ ಅವಾಂತರ ಅಧಿಕವಾಗುತ್ತದೆ ಮತ್ತು ಮಂದವಾದ ಲೋಳೆದ್ರವ ಉತ್ಪತ್ತಿ ಆಗುತ್ತದೆ. ನೆಗಡಿ ಒಬ್ಬರಿಂದೊಬ್ಬರಿಗೆ ಸಣ್ಣ ಹನಿ ರೂಪ ಪ್ರಸಾರ ವಿಧಾನದಿಂದ ಹರಡುತ್ತದೆ. ರೋಗಿ ಕೆಮ್ಮಿದಾಗ ಇಲ್ಲವೇ ಸೀನಿದಾಗ ವಿಷಾಣುಯುಕ್ತ ಹನಿಗಳು ಆವರಣದಲ್ಲಿ ಸೇರಿ ಸುತ್ತ ಇರುವವರಿಗೆ ಉಸಿರಾಟದ ವಾಯುವಿನ ಮೂಲಕ ವ್ಯಾಪಿಸುತ್ತವೆ. ಇಂಥ ವಾಯು ನೀರಿನ ಅಂಶವನ್ನು ಕಳೆದುಕೊಂಡು ಹಗುರವಾಗಿ ಎರಡು ಮೂರು ದಿವಸಗಳ ತನಕವೂ ಜೀವಂತ ವಿಷಾಣುಗಳನ್ನು ಧರಿಸಿರುವುದು. ಆಕಾರದಲ್ಲಿ ಬಲು ಸಣ್ಣದಾಗಿ ಹಗುರವಾಗಿರುವುದರಿಂದ ಇವು ವಾಯುವಿನಲ್ಲಿ ಸ್ಥಳದಿಂದ ಸ್ಥಳಕ್ಕೆ ಒಯ್ಯಲ್ಪಟ್ಟು ಬೇರೆಯವರಿಗೆ ನೆಗಡಿಯನ್ನು ಅಂಟಿಸಬಲ್ಲವು. ನೆಗಡಿ ಇರುವವರು ಉಪಯೋಗಿಸಿದ ಕೈವಸ್ತ್ರ, ಕಂಬಳಿ, ಪಾತ್ರೆ ಮುಂತಾದವುಗಳಿಂದಲೂ ರೋಗ ಇತರರಿಗೆ ಹರಡುತ್ತದೆ. ಒಟ್ಟು ರೋಗದ ಅವಧಿ ಏಳರಿಂದ ಒಂಬತ್ತು ದಿವಸಗಳ ತನಕ, ಒಮ್ಮೆ ನೆಗಡಿ ಬಂದವರಿಗೆ ಮತ್ತೆ ಸಾಮಾನ್ಯವಾಗಿ ಒಂದರಿಂದ ಎರಡು ತಿಂಗಳತನಕ ಬರುವುದಿಲ್ಲ. ಕಾರಣ ನೆಗಡಿ ಅಧಿಕ ನಿರೋಧ ಪ್ರವೃತ್ತಿಯನ್ನು ಉತ್ಪಾದಿಸುತ್ತದೆ. ನೆಗಡಿಯ ಪ್ರಾರಂಭದಲ್ಲಿ ರಕ್ತನಾಳಗಳ ಕುಗ್ಗುವಿಕೆ ಮತ್ತು ಹಿಗ್ಗುವಿಕೆ ಕಂಡುಬಂದು ಅನಂತರ ಮೂಗಿನ ಹೊಳ್ಳೆಗಳ ಲೋಳೆ ದ್ರವದಲ್ಲಿ ಲೈಸೊಸೋಮ್ ಬಲುಮಟ್ಟಿಗೆ ಕಡಿಮೆಯಾಗಿರುವುದು. ಇವೇ ನೆಗಡಿಯಿಂದ ಉಂಟಾಗುವ ದೇಹಕ್ರಿಯಾ ವೈಪರೀತ್ಯಗಳು.

	ರೋಗದ ಚಿಹ್ನೆಗಳು: ರೋಗ ಪ್ರಾರಂಭವಾಗುವಾಗ ಚಳಿ ಬರಬಹುದು. ಅನಂತರ ನೆಗಡಿ ಮೂಗಿನ ಒಂದು ಹೊಳ್ಳೆಯಲ್ಲಿ ತಲೆದೋರಿ ಆಮೇಲೆ ಇನ್ನೊಂದು ಹೊಳ್ಳೆಗೆ ಹರಡುತ್ತದೆ. ಮೂಗಿನಲ್ಲಿ ಉರಿಯಾಗಿ ಸೀನು ಬರುವುದು. ಲೋಳೆ ದ್ರವ ಬಲು ಹೆಚ್ಚಿನ ಮೊತ್ತದಲ್ಲಿ ಮೂಗಿನ ಹೊಳ್ಳೆಗಳಲ್ಲಿ ಉತ್ಪತ್ತಿ ಆಗುತ್ತದೆ. ರೋಗಿ ಬಾಯಿಂದ ಉಸಿರಾಡಬೇಕಾಗಿ ಬಂದು ಅದು ಒಣಗುವುದು ಸಾಮಾನ್ಯ. ಮೂಗಿನಿಂದ ಬರುವ ದ್ರವ ಆದಿಯಲ್ಲಿ ನೀರಿನಂತೆ ತೆಳ್ಳಗೆ ಇರುವುದು. ಬರಬರುತ್ತ ಗಟ್ಟಿಯಾಗಿ ಬೆಳ್ಳಗಾಗುವುದು. ಬೇರೆ ವಿಷ ಕ್ರಿಮಿಗಳಿಂದ ಮರುಚಲ ಸೋಂಕು ಹತ್ತಿದರೆ ಮೂಗಿನ ಹೊಳ್ಳೆಗಳಿಂದ ಬರುವ ದ್ರವ ಹಸಿರು ಅಥವಾ ಹಳದಿ ಬಣ್ಣ ತಳೆಯುತ್ತದೆ. ಹೀಗಾದರೆ ರೋಗ ಬಹಳ ತೀವ್ರವಾಗಿದೆಯೆಂದು ಅರ್ಥ. ಮೂಗಿನಿಂದ ಬರುವ ದ್ರವ ಕೆಲವು ವೇಳೆಗಳಲ್ಲಿ ರಕ್ತಮಿಶ್ರಿತವಾಗಿರುವುದೂ ಉಂಟು. ವಿವಿಧ ಬಗೆಯ ವಿಷಕ್ರಿಮಿಗಳು ಮೂಗಿನ ಹೊಳ್ಳೆಗಳಲ್ಲಿ ಮರುಚಲ ಸೋಂಕನ್ನು ಹತ್ತಿಸದಿದ್ದರೆ ನೆಗಡಿ ಐದು ಅಥವಾ ಆರು ದಿವಸಗಳಲ್ಲಿ ಬಲು ಮಟ್ಟಿಗೆ ಗುಣವಾಗುವುದು. ನೆಗಡಿ ಮೂಗಿಗೆ ಸೀಮಿತವಾಗಿ ಅಲ್ಲೇ ಗುಣವಾಗುವುದುಂಟು. ನೆಗಡಿಯಿಂದ ವ್ಯಕ್ತಿ ನರಳುತ್ತಿರುವ ಕಾಲದಲ್ಲಿ ಜ್ವರ, ತಲೆನೋವು, ಮೈಕೈನೋವು, ಬೆನ್ನುನೋವು, ಮಲಬದ್ಧತೆ, ಕಣ್ಣು ಉರಿ, ಕಣ್ಣಿನಲ್ಲಿ ನೀರು ಬರುವುದು, ಮೂಗಿನಲ್ಲಿ ಉರಿ ಮತ್ತು ಕೆಮ್ಮು ಬರುವುದು ಮುಂತಾದ ಜಟಿಲತೆಗಳು ವ್ಯಕ್ತವಾಗುವುದು ಸಾಮಾನ್ಯ. ನೆಗಡಿ ಬಂದಾಗ ಮಕ್ಕಳಿಗೆ ಆಹಾರ ಸೇವಿಸಲು ಮತ್ತು ಉಸಿರಾಡಲು ಬಹಳ ಕಷ್ಟವಾಗುವುದು. ಮೂಗಿನ ಲೋಳೆಪೊರೆ ಉರಿಯೂತದಿಂದ ಕೆಂಪಗೂ ದಪ್ಪಗೂ ಆಗಿರುವುದು. ಉರಿಯೂತಗಳು ಮೂಗಿನಿಂದ ಮೂಗಿನ ಹಿಂಭಾಗಕ್ಕೂ ಗಂಟಲಿಗೂ ಹರಡಬಹುದು. ವಿಷಾಣುಗಳು ಜಠರ, ಮೂತ್ರಪಿಂಡ, ಹೃದಯ ಮತ್ತು ಕೀಲುಗಳಿಗೆ ಹರಡಿ ಜಟಿಲ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ನೆಗಡಿಯನ್ನು ಒಗ್ಗದಿಕೆಯ ಮೂಗುರಿತದಿಂದ (ಅಲರ್ಜಿಕ್ ರ್ಹೈನಿಟಿಸ್) ಬೇರ್ಪಡಿಸಿ ಪತ್ತೆಮಾಡುವುದು ಅಗತ್ಯ. ತನ್ನ ಮೂಗನ್ನು ಒರೆಸಲು ನೆಗಡಿ ಬಂದಿರುವ ರೋಗಿ ಉಪಯೋಗಿಸಿದ ಕೈಚೌಕವನ್ನು ಒಣಗಿಸಿದರೆ ಅದು ಗಂಜಿ ಹಾಕಿದ ಬಟ್ಟೆಯಂತೆ ಗಟ್ಟಿಯಾಗಿರುವುದು. ಒಗ್ಗದಿಕೆಯ ಮೂಗುರಿತದಲ್ಲಿ ಮೂಗಿನಲ್ಲಿ ಬರುವ ದ್ರವದಲ್ಲಿ ಇಯೊಸೀನೊಫಿಲ್ ರಕ್ತಕಣಗಳಿರುವುವು. ನೆಗಡಿ ಇತರರಿಗೆ ಹರಡದಂತೆ ಕ್ರಮಗಳನ್ನು ಕೈಗೊಳ್ಳುವುದು ಯುಕ್ತ. ನೆಗಡಿ ಬಂದ ರೋಗಿಯನ್ನು ಇತರರಿಂದ ಬೇರ್ಪಡಿಸುವುದು, ಒಂದೇ ಕೊಠಡಿಯಲ್ಲಿ ಬಹುಜನ ವಾಸಿಸುವುದನ್ನು ತಡೆಗಟ್ಟುವುದು, ರೋಗಿ ಉಪಯೋಗಿಸಿದ ವಸ್ತ್ರಗಳನ್ನು ಆದಷ್ಟು ಸುಟ್ಟುಹಾಕುವುದು ಇಲ್ಲವೆ ಸ್ವಚ್ಛಮಾಡಿಸುವುದು ಇವು ಇಂಥ ಕ್ರಮಗಳು. ವ್ಯಕ್ತಿಗೆ ರೋಗ ಅಂಟದಂತೆ ರಕ್ಷಣೆ ಒದಗಿಸುವುದು, ಒಳ್ಳೆಯ ಪೌಷ್ಟಿಕ ಆಹಾರವನ್ನು ಒದಗಿಸುವುದು, ಕೊಠಡಿಗಳನ್ನು ಸ್ವಚ್ಛವಾಗಿ ಇಡುವುದು, ಗಾಳಿ, ಬೆಳಕು, ಧಾರಾಳವಾಗಿ ಬರುವಂತೆ ಏರ್ಪಡಿಸುವುದು ಇತ್ಯಾದಿ, ಉಪಯುಕ್ತ ಮಾರ್ಗಗಳು. ಮೂಗಿನ ಮಧ್ಯದ ಪೊರೆ ಡೊಂಕಾಗಿದ್ದರೆ ಮತ್ತು ಮೂಗಿನ ಹೊಳ್ಳೆಯಲ್ಲಿ ದುರ್ಮಾಂಸವಿದ್ದರೆ ಅವನ್ನು ಶಸ್ತ್ರಕ್ರಿಯೆಯಿಂದ ನಿವಾರಿಸಿ ನೆಗಡಿ ಬಾರದಂತೆ ರಕ್ಷಣೆ ಒದಗಿಸಬಹುದು. ಚುಚ್ಚುಮದ್ದನ್ನು ಕೊಡುವುದು ರಕ್ಷಣೆಯ ಇನ್ನೊಂದು ವಿಧ. ನೆಗಡಿಗೆ ಚಿಕಿತ್ಸೆ ಮಾಡುವಾಗ ರೋಗಿಗೆ ಪೂರ್ಣ ವಿಶ್ರಾಂತಿ ಕೊಡುವುದೂ ರೋಗಿಯನ್ನು ಬಿಸಿ ನೀರಿನ ಸ್ನಾನದ ತೊಟ್ಟಿಯಲ್ಲಿ ಐದು ಮಿನಿಟುಗಳಷ್ಟು ಹೊತ್ತು ಕುಳ್ಳಿರಿಸುವುದೂ ಮುಖ್ಯ ಕ್ರಮಗಳು. ಚಿಕಿತ್ಸೆಗೆ ಒಳಪಡಿಸದ ಸಾಮಾನ್ಯ ನೆಗಡಿಯ ಅವಧಿ ಏಳು ದಿವಸಗಳಾದರೆ ಚಿಕಿತ್ಸೆಗೆ ಒಳಪಡಿಸಿದುದರದು ಒಂದು ವಾರ ಎನ್ನುವ ಅನುಭವೋಕ್ತಿ ಉತ್ಪ್ರೇಕ್ಷೆ ಅಲ್ಲ.
(ಎಂ.ಎಸ್.ಯ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ